Wednesday 17 June 2015

ಮಲ್ಲಿಗೆ...

                                  ಮಲ್ಲಿಗೆ...

ಹೂ ಬನದ ಹೃದಯದಲ್ಲಿ ಅರಳಿದೊಂದು ಮಲ್ಲಿಗೆ
ಗಾಳಿ ಬೀಸಿ ತಂಪಿನಲಿ ಉದುರಿದೊಂದು ಮಲ್ಲಿಗೆ

ಚಿಟ್ಟೆ ಚೆಲುವ ಬಣ್ಣಕೆ, ಬೆರಗುಗೊಂಡುದೊಂದು ಮಲ್ಲಿಗೆ
ಜೇನು, ದುಂಬಿ ಮುಟ್ಟಿ, ಮುನಿದು, ಕೆರಳಿದೊಂದು ಮಲ್ಲಿಗೆ

ಹಾದಿ ಬದಿಯ ನೋಟಗಳಿಗೆ ಅದುರಿದೊಂದು ಮಲ್ಲಿಗೆ
ಹೆಜ್ಜೆಯ ಅಡಿ, ಮೌನದಿಂದ ನರಳಿದೊಂದು ಮಲ್ಲಿಗೆ

ಕಿತ್ತು, ಬಿಟ್ಟು ಹೋದ ಕೈಯ ಘಮಗಳಲ್ಲಿ ಮಲ್ಲಿಗೆ
ಕಟ್ಟಿ, ಹೆಣೆದು ಮಾಲೆಯಾಗಿ ದಾರದಲ್ಲಿ ಮಲ್ಲಿಗೆ

ನಲ್ಲ-ನಲ್ಲೆ ಪ್ರೀತಿಯ ಅರುಹಿನಲ್ಲಿ ಮಲ್ಲಿಗೆ
ಪತಿಯ ಪ್ರೇಮವಾಗಿ ಸತಿಯ ತುರುಬಿನಲ್ಲಿ ಮಲ್ಲಿಗೆ

ಕಂದಗೆ ಸಿಂಗರಿಸಿದ ತೊಟ್ಟಿಲಲ್ಲಿ ಮಲ್ಲಿಗೆ
ಶುಭದ ಸ್ವಾಗತಕೆ ಮನೆಯ ಮೆಟ್ಟಿಲಲ್ಲಿ ಮಲ್ಲಿಗೆ

ಮೊಗಕೆ ಮೆತ್ತಿ, ಮೆದ್ದ ಜೇನ ಬಟ್ಟಲಲ್ಲಿ ಮಲ್ಲಿಗೆ
ನಗುವ ಮಗುವ ಒಗರು ರುಚಿಗೆ ಜೊಲ್ಲಿನಲ್ಲಿ ಮಲ್ಲಿಗೆ

ಎಸೆದು ಎಸೆದು ಆಟವಾಗಿ ನಲುಗಿದೊಂದು ಮಲ್ಲಿಗೆ
ಯಾರಿಗೂ ಕಾಣದಂತೆ ಮುದುಡಿದೊಂದು ಮಲ್ಲಿಗೆ

ದೇವ ಪಾದ ಸ್ಪರ್ಶದೆ ನಲಿದುದೊಂದು ಮಲ್ಲಿಗೆ
ಜೀವವಿರದ ದೇಹದಿಂದ ಹೊರಳಿದೊಂದು ಮಲ್ಲಿಗೆ

ನಲಿವಿಗರಳಿ, ನೋವಿಗುರುಳಿ, ಮುದ್ದು ಮನದ ಮಲ್ಲಿಗೆ
ಅರಳಿ ಬಾಡುವುದರೊಳಗೆ ಹೇಳು, ನಿನ್ನ ಪಯಣ ಎಲ್ಲಿಗೆ??!!!


Saturday 23 May 2015

ಕನಸು...

                 ಕನಸು



ಇಬ್ಬನಿಯು ಕರಗಿ ಮೊಗ್ಗಾದ ಹಾಗೆ
ಮೊಗ್ಗೆಲ್ಲ ಅರಳಿ ಹೂವಾದ ಹಾಗೆ
ಹೂವೆಲ್ಲ ಕುಣಿದು ನಲಿದಿರುವ ಹಾಗೆ
ನಲಿವಿನಲಿ ಪರಿಮಳವು ಹೊಮ್ಮಿರುವ ಹಾಗೆ



ಪರಿಮಳವು ಗಾಳಿಯಲಿ ಕಲೆತಿರುವ ಹಾಗೆ
ಗಾಳಿಯಲಿ ಮರಗಿಡವು ತೂಗಿರುವ ಹಾಗೆ
ಮರಗಿಡದ ನೆರಳಿನಲಿ ತಂಪಿರುವ ಹಾಗೆ
ತಂಪಿನಲಿ ಶಾಂತತೆಯ ಅಂಚಿರುವ ಹಾಗೆ


ಶಾಂತತೆಯ ಅಂಚಿನಲಿ ಮಿಂಚಿರುವ ಹಾಗೆ
ಮಿಂಚಿನಡಿ ತಾರೆಗಳ ಹೊಳಪಿರುವ ಹಾಗೆ
ತಾರೆಗಳು ಚಂದಿರನ ಬಿಂಬಿಸುವ ಹಾಗೆ
ಬಿಂಬಿಸುವ ಗುಂಗಿನಲಿ ಸೊಗಸಿರುವ ಹಾಗೆ


ಸೊಗಸಿತ್ತ ಚಿತ್ತದಲಿ ಒಲವಿರುವ ಹಾಗೆ
ಒಲವೆಂಬ ಆಸರೆಯ ಮುತ್ತಿರುವ ಹಾಗೆ
ಮುತ್ತಿನಲಿ ಮೆತ್ತನೆಯ ಮತ್ತಿರುವ ಹಾಗೆ
ಮತ್ತೆಲ್ಲ ಕಲ್ಪನೆಯ ಕೆತ್ತಿರುವ ಹಾಗೆ


ಕಲ್ಪನೆಯ ಆಸೆಗಳು ಸುತ್ತಿರುವ ಹಾಗೆ
ಆಸೆಗಳು ಭರವಸೆಯ ಹೊತ್ತಿರುವ ಹಾಗೆ
ಭರವಸೆಯು ಚೆಲುವನ್ನು ಬಿತ್ತಿರುವ ಹಾಗೆ
ಚೆಲುವೆಲ್ಲ ಮನವನ್ನು ಹೊಕ್ಕಿರುವ ಹಾಗೆ


ಮನದಲ್ಲಿ ಗಿಡವೊಂದು ಬೆಳೆದಿರುವ ಹಾಗೆ
ಗಿಡ ಸ್ಪಂದನವಿಂದು ಪಡೆದಿರುವ ಹಾಗೆ
ಸ್ಪಂದನದ ಅಂದವದು ಸಜ್ಜಾದ ಹಾಗೆ
ಸಜ್ಜಾಗಿ ಇಬ್ಬನಿಯಲಿ ಮೊಗ್ಗಾದ ಹಾಗೆ


ಕನಸನ್ನು ಕಂಡಿರುವೆ ನಾನಿಂದು ಹೀಗೆ
ಮರೆತಿರುವೆ ನೂರಾರು ನೋವುಗಳ ಬೇಗೆ
ಎದುರಿಸುವೆ ಬದುಕನ್ನು ಅದು ಬರುವ ಹಾಗೆ
ತೇಲುವೆನು ಸಡಗರದ ಅಲೆಯಲ್ಲಿ ಹೀಗೆ...

Thursday 7 May 2015

ನಾ ಎಂದೆಂದಿಗೂ ನಿನ್ನ ಅನುಯಾಯಿ


ಬಾಳು ಕೊಟ್ಟವ ನೀನೇ, ಉಸಿರನಿಟ್ಟವ ನೀನೇ
ಬದುಕಿನುದ್ದಗಲ, ಜೊತೆಗೆ ನಿಂತವ ನೀನೇ
ಎಲ್ಲಕೂ ಕಾರಣನು ನೀನೊಬ್ಬ ಸಾಯಿ
ನಾ ಎಂದೆಂದಿಗೂ ನಿನ್ನ ಅನುಯಾಯಿ

ಬೇಕು ಬೇಡಗಳ ಬಾಳ ಜಂಜಾಟದಲಿ
ಬಳಲಿಕೆ ಬೇಡಿಕೆಗಳ ನಿತ್ಯದ ತೊಳಲಾಟದಲಿ
ಮೊರೆ ಕೇಳಿ, ಮರುಗಿ, ಮನವ ತುಂಬಿದವ ಸಾಯಿ
ನಾ ಎಂದೆಂದಿಗೂ ನಿನ್ನ ಅನುಯಾಯಿ

ಗೊಂದಲಗಳ ಕೆಸರಲಿ, ನೊಂದು, ನೆನೆಯುವೆ ನಾ
ನೆಮ್ಮದಿಯ ಹಸಿರ, ಚಿಗುರಿಸಿ, ಕಾಯುವೆ ನೀ
ನಿನಗೆ ನೀನೇ ಸಾಟಿ, ಓ ಮಹಿಮಾಯಿ
ನಾ ಎಂದೆಂದಿಗೂ ನಿನ್ನ ಅನುಯಾಯಿ

ವಂದಿಸಿದೆನೊಮ್ಮೆ, ನಿಂದಿಸಿದೆನೊಮ್ಮೆ
ಕಂಗೆಟ್ಟು, ಕಾಲಡಿ ಕಂಬನಿಗರೆದೆನಿನ್ನೊಮ್ಮೆ
ಮನುಜೆ ನಾ, ಮಹಿಮ ನೀ, ಕ್ಷಮಿಸೆನ್ನ ಸಾಯಿ
ನಾ ಎಂದೆಂದಿಗೂ ನಿನ್ನ ಅನುಯಾಯಿ

ಕಷ್ಟದೊಳು ಛಲವಾಗಿ, ಸುಖದೊಳು ನಲಿವಾಗಿ
ಸೋಲ ಹಾದಿಯಲಿ ಗೆಲುವ ಹೆಜ್ಜೆಯಾಗಿ
ಕತ್ತಲೊಳು ಬೆಳಕಾಗಿ ಸಲಹೆನ್ನ ಸಾಯಿ
ನಾ ಎಂದೆಂದಿಗೂ ನಿನ್ನ ಅನುಯಾಯಿ

ಹೇಗೆ ತಿಳಿವೆ ನಿನ್ನ ನಾ, ಶಕ್ತಿ ನನಗೆಲ್ಲಿದೆ?
ನನ್ನ ಇಹ ಪರಗಳ ಅರಿವು, ನಿನ್ನ ಯುಕ್ತಿಯಲ್ಲಿದೆ
ಅಲ್ಪಳು ನಾ, ಅಗಾಧ ನೀ, ಅನವರತವೂ ಸಾಯಿ
ನಾ ಎಂದೆಂದಿಗೂ ನಿನ್ನ ಅನುಯಾಯಿ

ಏಳು ಬೀಳುಗಳಿರಲಿ, ನೋವು ನೂರಾರಿರಲಿ
ಏನಾದರೂ ನಿನ್ನ ನಾಮ ಜಪವಿರಲಿ
ಸಹನೆ, ತಾಳ್ಮೆಯ ಕಲಿಸಿ, ಕಾಪಾಡು ಸಾಯಿ
ಓ ಬಾಬ ಸಾಯಿ, ನಾ ನಿನ್ನ ಅನುಯಾಯಿ